*ಅಶೋಕನ ಶಾಸನ, ಬೌದ್ಧ ಪರಂಪರೆಗೆ ಹೊಸ ಸ್ಪರ್ಶ; ಪ್ರವಾಸೋದ್ಯಮಕ್ಕೆ ದೊಡ್ಡ ಬಲ; ಸಚಿವ ಪ್ರಿಯಾಂಕ ಖರ್ಗೆ.*

*ಸಕ್ಕರೆ ನಾಡು ಕಲಬುರಗಿ*: ಕಲ್ಯಾಣ ಕರ್ನಾಟಕದ ಐತಿಹಾಸಿಕ ಹಾಗೂ ಪುರಾತತ್ವ ಪರಂಪರೆಯ ಹೆಮ್ಮೆಯಾಗಿರುವ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಸನ್ನತಿಗೆ ಅಂತರರಾಷ್ಟ್ರೀಯ ಮಟ್ಟದ ಗುರುತಿನೊಡನೆ ಸಮಗ್ರ ಅಭಿವೃದ್ಧಿಯ ಭಾಗ್ಯ ಒಲಿಯಲಿದೆ. ಪ್ರಾಚೀನ ಬೌದ್ಧ ಧರ್ಮದ ಪ್ರಮುಖ ಕೇಂದ್ರವಾಗಿರುವ ಸನ್ನತಿಯನ್ನು ಜಾಗತಿಕ ಪಾರಂಪರಿಕ, ಸಾಂಸ್ಕೃತಿಕ ಮತ್ತು ಪ್ರವಾಸಿ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

*ಅಶೋಕನ ಕಾಲದ ಇತಿಹಾಸಕ್ಕೆ ಮರುಜೀವ*

ಸಾಮಾನ್ಯ ಪ್ರವಾಸಿ ತಾಣವಾಗಿ ಉಳಿದಿರುವ ಸನ್ನತಿಯನ್ನು ಜಾಗತಿಕ ಪ್ರವಾಸಿ ನಕ್ಷೆಯಲ್ಲಿ ಗುರುತಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಅಶೋಕನ ಶಾಸನಗಳು, ಬೌದ್ಧ ಕಾಲಘಟ್ಟದ ಪುರಾತನ ಅವಶೇಷಗಳು ಹಾಗೂ ಐತಿಹಾಸಿಕ ಕುರುಹುಗಳನ್ನು ಹೊಂದಿರುವ ಸನ್ನತಿ ಪ್ರಾಚೀನ ಭಾರತದ ಬೌದ್ಧ ಪರಂಪರೆಯ ಮಹತ್ವದ ಕೊಂಡಿಯಾಗಿದೆ. ಇಂತಹ ಅಪೂರ್ವ ಐತಿಹಾಸಿಕ ಸಂಪತ್ತನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದರ ಜತೆಗೆ, ಭಗವಾನ್ ಬುದ್ಧನ ತತ್ವ, ಬೋಧನೆ ಮತ್ತು ಜೀವನ ಸಂದೇಶಗಳನ್ನು ವಿಶ್ವದ ಜನರಿಗೆ ಪರಿಚಯಿಸಲು ಪ್ರಾಧಿಕಾರ ಕಾರ್ಯನಿರ್ವಹಿಸಲಿದೆ.

*ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ*

ಸನ್ನತಿಯ ಅಭಿವೃದ್ಧಿ ಕೇವಲ ಸ್ಮಾರಕಗಳ ಸಂರಕ್ಷಣೆಗೆ ಸೀಮಿತವಾಗದೆ, ಸಮಗ್ರ ನಗರಾಭಿವೃದ್ಧಿಯ ಸ್ವರೂಪ ಪಡೆಯಲಿದೆ. ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಅಗತ್ಯವಿರುವ ರಸ್ತೆ, ಬೀದಿ ದೀಪ, ಕುಡಿಯುವ ನೀರು, ಒಳಚರಂಡಿ, ಸ್ವಚ್ಛತೆ, ವಿದ್ಯುತ್ ವ್ಯವಸ್ಥೆ, ಮಾರುಕಟ್ಟೆ, ಗ್ರಂಥಾಲಯ ಮತ್ತು ಮನರಂಜನಾ ಕೇಂದ್ರಗಳ ನಿರ್ಮಾಣಕ್ಕೂ ಪ್ರಾಧಿಕಾರಕ್ಕೆ ಅಧಿಕಾರ ನೀಡಲಾಗಿದೆ.

ಇದರೊಂದಿಗೆ ಪುರಾತನ ಸ್ಮಾರಕಗಳ ಸಂರಕ್ಷಣೆ, ಪುರಾತತ್ವ ಸಂಶೋಧನೆ, ಅಧ್ಯಯನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ಸನ್ನತಿಯನ್ನು ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಜೀವಂತ ಕೇಂದ್ರವನ್ನಾಗಿ ರೂಪಿಸುವ ಆಶಯವೂ ಈ ಯೋಜನೆಯಲ್ಲಿದೆ.

*ಸ್ಥಳೀಯರಿಗೆ ಉದ್ಯೋಗ, ಜಿಲ್ಲೆಗೆ ಪ್ರವಾಸಿ ಆದಾಯ*

ಸನ್ನತಿಯ ಸಮಗ್ರ ಅಭಿವೃದ್ಧಿಯಿಂದ ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಚೈತನ್ಯ ದೊರೆಯುವ ನಿರೀಕ್ಷೆಯಿದೆ. ದೇಶ-ವಿದೇಶಗಳಿಂದ ಪ್ರವಾಸಿಗರು, ಸಂಶೋಧಕರು ಹಾಗೂ ಬೌದ್ಧ ಧರ್ಮದ ಅನುಯಾಯಿಗಳು ಆಗಮಿಸುವ ವಾತಾವರಣ ನಿರ್ಮಾಣವಾದರೆ, ಸ್ಥಳೀಯ ವ್ಯಾಪಾರ, ವಸತಿ, ಸಾರಿಗೆ, ಹೋಟೆಲ್ ಹಾಗೂ ಪ್ರವಾಸಿ ಸೇವೆಗಳ ವಲಯದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಲಿವೆ. ಇದರಿಂದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳೂ ಸೃಷ್ಟಿಯಾಗುವ ಸಾಧ್ಯತೆಯಿದೆ.

ಒಟ್ಟಾರೆ, ಸನ್ನತಿ ಅಭಿವೃದ್ಧಿ ಪ್ರಾಧಿಕಾರದ ರಚನೆ ಕಲ್ಯಾಣ ಕರ್ನಾಟಕದ ಐತಿಹಾಸಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಆದರೆ, ಸಂಪುಟದ ಅನುಮೋದನೆ ಘೋಷಣೆಯಾಗಿ ಉಳಿಯದೆ, ಸಮರ್ಪಕ ಅನುದಾನ, ಕಾಲಮಿತಿಯ ಕಾಮಗಾರಿ ಹಾಗೂ ಪರಿಣಾಮಕಾರಿ ಅನುಷ್ಠಾನದ ಮೂಲಕ ಸಾಕಾರಗೊಳ್ಳಬೇಕಿದೆ. ಆಗ ಮಾತ್ರ ಸನ್ನತಿ ವಿಶ್ವದ ಪ್ರಮುಖ ಬೌದ್ಧ ಪಾರಂಪರಿಕ ತಾಣಗಳ ಸಾಲಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ.

-ಚಂದ್ರಶೇಖರಸ್ವಾಮಿ.ಎಮ್
ಸಂಪಾದಕರು.