*ಕೃಷಿ ಮೇಳಕ್ಕೆ ಅದ್ದೂರಿ ಚಾಲನೆ: ಸಚಿವ ನರೇಂದ್ರಸ್ವಾಮಿ*

*ಸಕ್ಕರೆ ನಾಡು ಬೆಂಗಳೂರು*: ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ, ವೈಜ್ಞಾನಿಕ ಸಂಶೋಧನೆ ಹಾಗೂ ನವೀನ ಕೃಷಿ ಪದ್ಧತಿಗಳ ಅರಿವು ಮೂಡಿಸುವ ಉದ್ದೇಶದಿಂದ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಆಯೋಜಿಸಿರುವ ಮೂರು ದಿನಗಳ ಕೃಷಿ ಮೇಳ–2026ಕ್ಕೆ ಸಚಿವ ನರೇಂದ್ರಸ್ವಾಮಿ ಅವರು ಇಂದು ಅದ್ದೂರಿಯಾಗಿ ಚಾಲನೆ ನೀಡಿದರು.

ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆಯುತ್ತಿರುವ ಈ ಮೇಳವು ರೈತರು, ಕೃಷಿ ವಿಜ್ಞಾನಿಗಳು, ಸಂಶೋಧಕರು ಹಾಗೂ ಕೃಷಿ ಉದ್ಯಮಿಗಳ ನಡುವೆ ಜ್ಞಾನ ವಿನಿಮಯಕ್ಕೆ ಮಹತ್ವದ ವೇದಿಕೆಯಾಗಲಿದೆ. ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಆವಿಷ್ಕಾರಗಳು, ಸುಧಾರಿತ ತಂತ್ರಜ್ಞಾನಗಳು, ಸಂಶೋಧನಾಗಳು ಹಾಗೂ ಕೃಷಿ ಸಂಬಂಧಿತ ಮಾಹಿತಿಯನ್ನು ರೈತ ಸಮುದಾಯಕ್ಕೆ ತಲುಪಿಸುವುದು ಮೇಳದ ಪ್ರಮುಖ ಉದ್ದೇಶವಾಗಿದೆ.

ಮೂರು ದಿನಗಳ ಕಾಲ ನಡೆಯಲಿರುವ ಮೇಳದಲ್ಲಿ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದ ವಿವಿಧ ತಂತ್ರಜ್ಞಾನಗಳು ಹಾಗೂ ನವೀನ ಪ್ರಯೋಗಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಕೃಷ್ಣ ಬೈರೇಗೌಡ, ಶಾಸಕ ಎಸ್.ಆರ್. ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಸುಧಾಮದಾಸ್, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ವೆಂಕಟರವಣ, ಕೃಷಿ ಇಲಾಖೆ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ, ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ರಾಜಶೇಖರಪ್ಪ ಮತ್ತು ನವೀನ್, ಕುಲಸಚಿವ ಮಧುಸೂಧನ್, ಸಂಶೋಧನಾ ನಿರ್ದೇಶಕ ಮೂಡಲಗಿರಿಯಪ್ಪ ಹಾಗೂ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣುವರ್ಧನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕೃಷಿ ಮೇಳವು ರೈತರಿಗೆ ಹೊಸ ತಂತ್ರಜ್ಞಾನಗಳ ಪರಿಚಯದ ಜತೆಗೆ ಕೃಷಿಯನ್ನು ಮತ್ತಷ್ಟು ಲಾಭದಾಯಕವಾಗಿಸಿಕೊಳ್ಳಲು ಅಗತ್ಯವಾದ ಮಾಹಿತಿ ಮತ್ತು ಮಾರ್ಗದರ್ಶನ ಒದಗಿಸುವ ನಿರೀಕ್ಷೆಯಿದೆ.