ಕೃಷಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ಬಯಲು: ಭ್ರಷ್ಟ ಅಧಿಕಾರಿಗಳ ಎದುರಾಗಿ ಲೋಕಾಯುಕ್ತಕ್ಕೆ ದೂರು

​ರೈತರ ಬೆನ್ನೆಲುಬಾಗಿರಬೇಕಾದ ಕೃಷಿ ಇಲಾಖೆಯಲ್ಲಿಯೇ ಕೋಟ್ಯಂತರ ರೂಪಾಯಿಗಳ ಹಗರಣಗಳು ಬೆಳಕಿಗೆ ಬಂದಿವೆ. ಸಾರ್ವಜನಿಕರ ತೆರಿಗೆ ಹಣ ಹಾಗೂ ಕೃಷಿ ಏಳಿಗೆಗೆ ಮೀಸಲಾದ ಅನುದಾನವನ್ನು ಲೂಟಿ ಹೊಡೆದಿರುವ ಅಧಿಕಾರಿಗಳ ಎದುರಾಗಿ ಸಾಮಾಜಿಕ ಕಾರ್ಯಕರ್ತ ರಾಮಲಿಂಗೇಗೌಡ ಡಿ.ಎಸ್. ಇಂದು (02-04-2026) ಕರ್ನಾಟಕ ಲೋಕಾಯುಕ್ತಕ್ಕೆ ಅಧಿಕೃತವಾಗಿ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ.

2.05 ಕೋಟಿ ಅನುದಾನ ಪೂರಾ ದುರ್ಬಳಕೆ ಬಗ್ಗೆ ದೂರು ಸಂಖ್ಯೆ: COMPT/LOK/MYS/1770/2026 ಯಡಿ ದಾಖಲಾಗಿದೆ. ​ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ಕೃಷಿ ಇಲಾಖೆಯ ಕಾಮಗಾರಿಗಳ ಹೆಸರಿನಲ್ಲಿ ಬರೋಬ್ಬರಿ 2.05 ಕೋಟಿ ರೂಪಾಯಿಗಳ ಅನುದಾನವನ್ನು ನುಂಗಿ ನೀರು ಕುಡಿಯಲಾಗಿದೆ. ಯಾವುದೇ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸದೆ, ನೈಜತೆ ಅರಿಯದೆ ಹಣ ಲೂಟಿ ಮಾಡಲಾಗಿದೆ.

ಕೊಳ್ಳೇಗಾಲದ ಸಹಾಯಕ ಕೃಷಿ ನಿರ್ದೇಶಕರು, ಅಂದಿನ ಪ್ರಭಾರಿ ಕೃಷಿ ಅಧಿಕಾರಿ ವೆಂಕಟನಾಯಕ್, ಅಂದಿನ ಕೃಷಿ ಅಧಿಕಾರಿ ಸುಂದರಮ್ಮ, ಚಾಮರಾಜನಗರದ ಅಂದಿನ ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್, ಹಾಲಿ ಜಂಟಿ ಕೃಷಿ ನಿರ್ದೇಶಕರು ಹಾಗೂ ಮೈಸೂರು ವಿಭಾಗದ ಜಾಗೃತ ಕೋಶದ ಜಂಟಿ ಕೃಷಿ ನಿರ್ದೇಶಕರ ಎದುರಾಗಿ ದೂರು ದಾಖಲಾಗಿದೆ. ತಪ್ಪಿತಸ್ಥರ ಎದುರು ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಲೂಟಿಯಾದ ಸಂಪೂರ್ಣ ಹಣವನ್ನು ತನಿಖೆ ಮಾಡಿ ಬಡ್ಡಿ ಸಮೇತ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಹಾಗೂ ಭ್ರಷ್ಟರಿಗೆ ರಕ್ಷಣೆ (ಕರ್ತವ್ಯ ಲೋಪ) ಬಗ್ಗೆ ದೂರು ಸಂಖ್ಯೆ: COMPT/LOK/MYS/1768/2026 ಮೂಲಕ ಇನ್ನೊಂದು ದೂರು ಕೂಡ ದಾಖಲಾಗಿದೆ. ​ಗುಂಡ್ಲುಪೇಟೆ ತಾಲೂಕಿನ ಕಸಬಾ ರೈತ ಸಂಪರ್ಕ ಕೇಂದ್ರದ ನಿವೃತ್ತ ಕೃಷಿ ಅಧಿಕಾರಿ ಬಿ. ಸೋಮಸುಂದರ್ ತಮ್ಮ ಅಧಿಕಾರದ ಹೊತ್ತಿನಲ್ಲಿ ಭಾರಿ ಪ್ರಮಾಣದ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ. ಈ ಬಗ್ಗೆ ದೂರು ನೀಡಿದ್ದರೂ, ಕೃಷಿ ಇಲಾಖೆಯ ಉನ್ನತ ಅಧಿಕಾರಿಗಳು ಯಾವುದೇ ತನಿಖೆ ನಡೆಸದೆ ಉದ್ದೇಶಪೂರ್ವಕವಾಗಿ ಅಸಡ್ಡೆ ಮಾಡಿ ಪತ್ರುವಳಿಗೆ ಜೊತೆ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.

ಬೆಂಗಳೂರಿನ ಕೃಷಿ ಆಯುಕ್ತಾಲಯದ ಆಡಳಿತಾಧಿಕಾರಿ, ನಿವೃತ್ತ ಕೃಷಿ ಅಧಿಕಾರಿ ಬಿ. ಸೋಮಸುಂದರ್, ಕೃಷಿ ಇಲಾಖೆಯ ಜಾಗೃತ ಕೋಶದ ಅಪರ ಕೃಷಿ ನಿರ್ದೇಶಕರು (ಬೆಂಗಳೂರು) ಹಾಗೂ ಚಾಮರಾಜನಗರದ ಜಂಟಿ ಕೃಷಿ ನಿರ್ದೇಶಕರ ಎದುರು ದೂರು ದಾಖಲಿಸಲಾಗಿದೆ. ಪತ್ತುವಳಿಗೆ ಕುಮ್ಮಕ್ಕು ನೀಡಿದ ಉನ್ನತ ಅಧಿಕಾರಿಗಳ ಎದುರು ಸಮಗ್ರ ಹಾಗೂ ಬಹು-ಆಯಾಮದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ರೈತರಿಗಾಗಿ ಮೀಸಲಾದ ಹಣವನ್ನು ಕೊಳ್ಳೆಹೊಡೆದ ಈ ಅಯೋಗ್ಯ ಅಧಿಕಾರಿಗಳ ಬಣ್ಣ ಬಯಲಾಗಬೇಕಿದೆ. ಕರುನಾಡಿನ ರೈತರ ಹಿತ ಕಾಯಲು ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ರಾಮಲಿಂಗೇಗೌಡ ಕೈಗೊಂಡಿರುವ ಈ ಕಾನೂನು ಹೋರಾಟಕ್ಕೆ ಗೆಲುವು ಸಿಗಲಿ. ಮಾನ್ಯ ಲೋಕಾಯುಕ್ತರು ನಿಷ್ಪಕ್ಷಪಾತ ತನಿಖೆ ನಡೆಸಿ ಭ್ರಷ್ಟರಿಗೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂಬುದು ನಾಡಿನ ಜನತೆಯ ಆಶಯವಾಗಿದೆ.